Member   Donate   Books   0

ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕರಾದ ಆಚಾರ್ಯ ಶ್ರೀ ಕೆ.ಆರ್.ಮನೋಜ್ ಜಿರವರ ಶಿವರಾತ್ರಿ ದಿನಸಂದೇಶ – 1

AVS

ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕರಾದ ಆಚಾರ್ಯ ಶ್ರೀ ಕೆ.ಆರ್.ಮನೋಜ್ ಜಿರವರ ಶಿವರಾತ್ರಿ ದಿನಸಂದೇಶ – 1

ಓಂ ನಮಃ ಶಿವಾಯ
ಎಲ್ಲರಿಗೂ ಅನುಗ್ರಹೀತ ಶಿವರಾತ್ರಿ ಶುಭಾಶಯಗಳು!
 
ಮಹಾಶಿವರಾತ್ರಿಯ ಮಹತ್ವ –
ಸನಾತನಧರ್ಮವನ್ನು (ವೇದ) ನೀಡಲು ಮಹರ್ಷಿಗಳ ಚಿತ್ತದಲ್ಲಿ ಮತ್ತು ಲೋಕಗಳಲ್ಲಿ ಆವಿರ್ಭವಿಸಿದ ಶ್ರೀಪರಮೇಶ್ವರನನ್ನು ಉಪಾಸಿಸುವ ವಿಶಿಷ್ಟ ದಿನವೇ ಶಿವರಾತ್ರಿ. ಶ್ರೀಪರಮೇಶ್ವರನ ಆವಿರ್ಭವ ದಿನವೂ, ಆರ್ಷಗುರುಪರಂಪರೆಗಳ ಮತ್ತು ಸನಾತನಧರ್ಮಶಾಸ್ತ್ರದ ಸ್ಥಾಪನಾ ದಿನವೂ ಶಿವರಾತ್ರಿ ಎಂದು ಹೇಳಬಹುದು. ಆವಿರ್ಭವ ಎಂದರೆ ಪ್ರತ್ಯಕ್ಷವಾಗುವುದು ಎಂದರ್ಥ. ಅಕಾಯನೂ, ನಿರಾಕಾರನೂ, ನಿರವಯವನೂ ಆದ ಪರಮಶಿವನು ಮೂರು ಲೋಕಗಳ ಜೀವಿಗಳ ಮುಂದೆ ವೇದವನ್ನು (ಈಶ್ವರಜ್ಞಾನ, ಸನಾತನಧರ್ಮ) ನೀಡಲು ಪ್ರತ್ಯಕ್ಷನಾದ ಸಂದರ್ಭಗಳನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸುವ ಪುಣ್ಯದಿನವೇ ಶಿವರಾತ್ರಿ.
 
ಯಾರು ಸನಾತನಧರ್ಮದ ಪರಮೇಶ್ವರ?
ವಿಶ್ವದ, ಕಾಲದ, ಚರಾಚರಗಳ ಈಶ್ವರನಾದ ಪರಮತತ್ವವೇ ಪರಮೇಶ್ವರ. ಕಾರಣಲೋಕಾಧಿಪತಿಗಳಾದ ಭಗವಂತರು, ಸೂಕ್ಷ್ಮಲೋಕವಾಸಿಗಳಾದ ದೇವತೆಗಳು, ಸ್ಥೂಲಲೋಕ ಜೀವಿಗಳು ಇವರೆಲ್ಲರ ಈಶ್ವರನಾದ್ದರಿಂದಲೂ ಹಾಗೂ ತನಗೆ ಸಮಾನನಾದ ಅಥವಾ ಪರನಾದ (ಅತೀತ) ಯಾರೂ ಇಲ್ಲದ ಕಾರಣದಿಂದಲೂ ಅವನು ಪರಮೇಶ್ವರನಾದನು.
Maha Shivaratri Part 1

ಎಂದೆಂದಿಗೂ ಇರುವ ಸನಾತನನು, ವಿಶ್ವದ, ಕಾಲದ, ಜೀವಿಗಳ ನಾಥನು, ಈಶ್ವರನೂ ಅವನೇ. ವಿಶ್ವೇಶ್ವರನು, ಕಾಲೇಶ್ವರನು, ಆತ್ಮೇಶ್ವರನು, ಭೂತೇಶ್ವರನು, ಸಕಲ ಚರಾಚರಗಳಿಗು ನಾಥನಾದ ಸರ್ವೇಶ್ವರನು ಆ ಪರಬ್ರಹ್ಮತತ್ವವೇ!

ಶ್ರೀಪರಮೇಶ್ವರನನ್ನು ಈಶ್ವರರಲ್ಲೆಲ್ಲಾ ಈಶ್ವರನಾದ ಮಹೇಶ್ವರನಾಗಿಯೂ, ದೇವತೆಗಳ ನಾಥನಾದ ಸುರೇಶ್ವರ, ದೇವದೇವ, ಮಹಾದೇವ ಎಂಬ ಹೆಸರುಗಳಿಂದಲೂ, ಕಾರಣ-ಸೂಕ್ಷ್ಮ-ಸ್ಥೂಲ ಲೋಕಗಳೆಲ್ಲದರ ಅಧಿಪತಿಯಾದ ವಿಶ್ವನಾಥನಾಗಿಯೂ (ವಿಶ್ವೇಶ್ವರ, ಜಗದೀಶ್ವರ, ಜಗನ್ನಾಥ), ಕಾಲದ ನಾಥನಾದ ಮಹಾಕಾಲನಾಗಿಯೂ (ಕಾಲೇಶ್ವರ, ಕಾಲನಾಥ), ಚರಾಚರಗಳೆಲ್ಲದರ ಆಶ್ರಯವಾದ ಪಶುಪತಿಯಾಗಿಯೂ (ಭೂತನಾಥ, ಭೂತೇಶ್ವರ, ಗಣಪತಿ, ಗಣೇಶ, ಗಣೇಶ್ವರ, ಗಣನಾಥ, ಜೀವನಾಥ, ಜೀವೇಶ್ವರ, ಆತ್ಮನಾಥ, ಆತ್ಮೇಶ್ವರ) ವೇದೋಪನಿಷತ್ತುಗಳು ಮತ್ತು ಋಷಿ ಪರಂಪರೆಗಳು ಒಂದೇ ರೀತಿ ವರ್ಣಿಸುತ್ತವೆ!

ಶ್ರೀಪರಮೇಶ್ವರನು ಅನಂತನು. ಅನಂತವಾದ (ಅಸಂಖ್ಯಾತ, ಎಣೆಯಿಲ್ಲದ) ಗುಣಗಳು, ಶಕ್ತಿಗಳು ಮತ್ತು ನಾಮಗಳನ್ನು ಹೊಂದಿರುವವನು. ಪರಮಶಿವ, ಪರಾಶಕ್ತಿ, ವಿಷ್ಣು, ಬ್ರಹ್ಮ, ರುದ್ರ, ಶಂಕರ, ಶಂಭು, ಗಣಪತಿ, ಸುಬ್ರಹ್ಮಣ್ಯ, ಶಾಸ್ತಾ, ಸನಾತನನು, ಪರಮಾತ್ಮ, ಪರಂಪೊರುಳ್, ಪರಬ್ರಹ್ಮ ಹೀಗೆ ಅನೇಕ ಹೆಸರುಗಳಿವೆ, ಆ ಪರಮತತ್ವಕ್ಕೆ.

ಮೂರು ಲೋಕಗಳು (ಬೋಧ-ಊರ್ಜ-ಭೌತಿಕ ಮಂಡಲಗಳು ಅಥವಾ ಸತ್ವರಜೋಸ್ತಮೋಲೋಕಗಳಾದ ಕಾರಣ-ಸೂಕ್ಷ್ಮ-ಸ್ಥೂಲಲೋಕಗಳು), ಕಾಲ, ಜೀವಿಗಳು ಇವುಗಳು ಉಂಟಾಗುವುದಕ್ಕೂ ಮೊದಲು ಇದ್ದ ಆದ್ಯನು, ಇವುಗಳೆಲ್ಲಾ ಉಂಟಾಗುವಾಗಲೂ, ಪರಿವರ್ತನೆಗೊಳ್ಳುವಾಗಲೂ, ಅದರ ನಂತರವೂ ತನ್ನ ಸ್ವಭಾವದಲ್ಲಿ, ಶಕ್ತಿವಿಶೇಷಗಳಲ್ಲಿ, ಮಹಿಮೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ, ಸೃಷ್ಟಿ ಪರಿಣಾಮಗಳಿಗು, ಪ್ರಕೃತಿನಿಯಮಗಳಿಗೂ ಒಳಪಡದೆ ಇರುವ ಅವ್ಯಯನು (ಅಚ್ಯುತನು), ಕೊನೆಯಲ್ಲಿ ಎಲ್ಲವನ್ನೂ ತನ್ನಲ್ಲಿ ಲೀನಗೊಳಿಸಿ ಏಕಮಾತ್ರಸತ್ಯಸ್ವರೂಪಿಯಾಗಿ ಬೆಳಗುವ ಕೇವಲನೂ ಆದ ಕಾರಣ ಅವನು ಸನಾತನನಾದನು.

ಮಂಗಳಮೂರ್ತಿಯಾದ ಶಂಭುವು, ಪರಮ ಒಳಿತನ್ನು ನೀಡುವ ಶಂಕರನು, ಎಲ್ಲದಕ್ಕೂ ಮೂಲವಾದ ನಾರಾಯಣನು, ಎಲ್ಲೆಡೆ ವ್ಯಾಪಿಸಿರುವ ವಿಷ್ಣುವು, ವಿಶ್ವೋತ್ಪತ್ತಿಗೆ ಕಾರಣಭೂತನಾದ್ದರಿಂದಲು ಹಾಗೂ ಬೃಹತ್ತಾದ ಸೃಷ್ಟಿಜ್ಞಾನ (ಪ್ರಪಂಚಬೋಧ) ಇರುವುದರಿಂದಲು ಬ್ರಹ್ಮನೂ ಅವನೇ. ಎಲ್ಲರನ್ನೂ ರಮಿಸುವ ರಾಮನು, ಎಲ್ಲರನ್ನೂ ತನ್ನೆಡೆಗೆ ಆಕರ್ಷಿಸುವ ಕೃಷ್ಣನು, ಸರ್ವ ದುಃಖದುರಿತಗಳನ್ನು ಪಾಪಗಳನ್ನೂ ಸಂಹರಿಸುವ ಹರನು, ವಿಶ್ವದ ಪ್ರಭುವಾದ ಹರಿಯು, ಜ್ಞಾನ ನೀಡಿ ಮಾಯೆ ಮತ್ತು ಅವಿದ್ಯೆಯನ್ನು ನಿವಾರಿಸಿ ಮೋಕ್ಷ ನೀಡುವ ರುದ್ರನೂ ಆದ ಪರಂಜ್ಯೋತಿ ಸಚ್ಚಿದಾನಂದಸ್ವರೂಪಿಯಾದ ಏಕ ಪರಬ್ರಹ್ಮತತ್ವವೇ ಸನಾತನಧರ್ಮದ ಪರಮೇಶ್ವರ.

ಜನನಮರಣರಹಿತನಾದ ಏಕರಕ್ಷಕನಾದ್ದರಿಂದ ಅಜೈಕಪಾತ್ ಮತ್ತು ಎಲ್ಲದಕ್ಕೂ ಆಧಾರವಾದ್ದರಿಂದ ಅಹಿರ್ಬುಧ್ನ್ಯನೂ ಅವನೇ. ಪರಂಪೊರುಳ್ ಸರ್ವವ್ಯಾಪಿಯೂ ಸರ್ವಾಂತರ್ಯಾಮಿಯೂ ಆಗಿದೆ. ಸಮಷ್ಟಿ ರೂಪದಲ್ಲಿ ಬ್ರಹ್ಮ ಮತ್ತು ವ್ಯಷ್ಟಿ ರೂಪದಲ್ಲಿ ಆತ್ಮ. ಶ್ರೀಪರಮೇಶ್ವರನು ವಾಸ್ತವವಾಗಿ ನಿರ್ಗುಣನು. ಸತ್ವರಜಸ್ತಮೋಗುಣಗಳೆಂಬ ತ್ರಿಗುಣಗಳಿಗತೀತನಾದ್ದರಿಂದಲೂ, ಮಾಯೆ ಬಾಧಿಸದ ಕಾರಣದಿಂದಲೂ ನಿರ್ಗುಣ ಎಂದು ವಿಶೇಷವಾಗಿ ಹೇಳಲಾಗುತ್ತದೆ. ನಿರಂಜನ, ನಿರವದ್ಯ, ನಿರಾಮಯ ಇವೆಲ್ಲಾ ಪರ್ಯಾಯ ಪದಗಳು. ಆದರೆ ಪ್ರಕೃತಿಯಲ್ಲಿ ಸ್ವಯಂ ಸೃಷ್ಟಿ ಪ್ರಕ್ರಿಯೆಗಳು ಮತ್ತು ಪ್ರತಿಭಾಸೆಗಳು ಪ್ರಾರಂಭವಾದಾಗ ಹಿರಣ್ಯಗರ್ಭನೆಂಬ ಸಗುಣನಾದನು.

ನಾಮರೂಪಗಳಲ್ಲಿ ವಿವಿಧ ತರ್ಕಗಳು ಉಂಟಾಗುತ್ತವೆ. ಈಶ್ವರನು ನಾಮರೂಪಗಳಿಗತೀತನು. ಇಂದ್ರಿಯಾನುಭವಗಳಿಗು, ಯುಕ್ತಿಚಿಂತನೆಗೂ ಮೀರಿದ ಧ್ಯಾನ-ಸಮಾಧಿಯ ಮೂಲಕ ಲಭ್ಯವಾಗುವ ಅಂತರ್ದರ್ಶನದಿಂದ (ಜ್ಞಾನ, Intuition) ತಿಳಿಯಬೇಕಾದವನು.
(ಹಲವು ಹೆಸರುಗಳ ಮೂಲಕ ಒಂದೇ ಒಂದು ಪರಮೇಶ್ವರತತ್ವವನ್ನು ಶ್ರುತಿಗಳು ಮತ್ತು ಋಷಿಪರಂಪರೆಗಳು ವಿಶೇಷವಾಗಿ ಹೇಳಿವೆ.
ಏಕಂ ಸತ್ ವಿಪ್ರಾ ಬಹುಧಾ ವದಂತಿ (ಪರಮಸತ್ಯ ಒಂದೇ ಇದೆ – ವಿಜ್ಞಾನಿಗಳು ಒಂದನ್ನು ಹಲವು ರೀತಿಯಲ್ಲಿ ಹೇಳುತ್ತಾರೆ.
ಸಚ್ಚಿದೇಕಂ ಬ್ರಹ್ಮ (ಸತ್, ಚಿತ್, ಏಕತ್ವ – ಪರಬ್ರಹ್ಮತತ್ವಲಕ್ಷಣ) ಎಷ್ಟು ಪ್ರಮಾಣಗಳು?! ವೇದದಲ್ಲಿ ಪ್ರತಿಪಾದಿಸುವ ದೇವತೆಗಳನ್ನು ಸೂಚಿಸುವ ಹೆಸರುಗಳೆಲ್ಲವೂ ಏಕನಾದ ಪರಬ್ರಹ್ಮತತ್ವದ ವಿವಿಧ ಗುಣಗಳನ್ನು ಉಲ್ಲೇಖಿಸಲು ಎಂದು ವೇದಶಬ್ದಕೋಶವಾದ ನಿರುಕ್ತದಲ್ಲಿ ಯಾಸ್ಕಮಹರ್ಷಿ ಹೇಳುತ್ತಾರೆ.
*ಏಕಸ್ಯಾತ್ಮನೋfನ್ಯೇ ದೇವಂ ಪ್ರತ್ಯಂಗಾನಿ ಭವತಿ*
(ಏಕನಾದ ಪರಮೇಶ್ವರನ ಪ್ರತ್ಯಂಗಗಳು (ಅವಯವಗಳು ಮತ್ತು ಗುಣವಾಚಿಯಾದ ನಾಮಗಳು) ಎಲ್ಲಾ ದೇವಶಬ್ದಗಳಾಗಿವೆ)
 
ಆದ್ದರಿಂದ ಈಶ್ವರನ ವಿವಿಧ ಪರ್ಯಾಯಗಳ ಹೆಸರಿನಲ್ಲಿರುವ ತಪ್ಪು ತಿಳುವಳಿಕೆಗಳು ಮತ್ತು ಸಂಘರ್ಷಗಳು ಬೇಡ. ರೂಪಗಳು ಉಂಟಾದಾಗ ಮಾತ್ರ ಭೇದಗಳು ಉಂಟಾಗುತ್ತವೆ. ಪರಮೇಶ್ವರನು ವಾಸ್ತವವಾಗಿ ಅಕಾಯನು, ನಿರಾಕಾರನು ಮತ್ತು ನಿರವಯವನು. ಹಾಗಾದರೆ ಧಾರ್ಮಿಕ ಸಂಘರ್ಷಗಳು ಹೇಗೆ ಉಂಟಾಗುತ್ತವೆ.?!
 
(ಆದರೆ ಪರಮೇಶ್ವರನು ಸರ್ವಶಕ್ತನಾದ್ದರಿಂದ ಸಕಾಯನು, ಸಾಕಾರನು ಮತ್ತು ಸಾವಯವನು ಆಗಲು ಸಾಧ್ಯ ಎಂಬುದನ್ನು ಮರೆಯುವುದಿಲ್ಲ. ಹಾಗೆ ಸಾಧಕರಿಗೆ ಅವರು ಇಷ್ಟಪಟ್ಟ ರೀತಿಯಲ್ಲಿ ಪ್ರತ್ಯಕ್ಷನಾದ ಪರಮೇಶ್ವರನ ವಿವಿಧ ರೂಪಗಳು ಕೆಲವು ಧ್ಯಾನಶ್ಲೋಕಗಳ ಮೂಲಕ ಪ್ರಚಲಿತವಾದವು.)
 
(ಮುಂದುವರಿಯುವುದು)