ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕರಾದ ಆಚಾರ್ಯ ಶ್ರೀ ಕೆ.ಆರ್.ಮನೋಜ್ ಜಿರವರ ಶಿವರಾತ್ರಿ ದಿನಸಂದೇಶ – 1
AVS
ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕರಾದ ಆಚಾರ್ಯ ಶ್ರೀ ಕೆ.ಆರ್.ಮನೋಜ್ ಜಿರವರ ಶಿವರಾತ್ರಿ ದಿನಸಂದೇಶ – 1
ಎಂದೆಂದಿಗೂ ಇರುವ ಸನಾತನನು, ವಿಶ್ವದ, ಕಾಲದ, ಜೀವಿಗಳ ನಾಥನು, ಈಶ್ವರನೂ ಅವನೇ. ವಿಶ್ವೇಶ್ವರನು, ಕಾಲೇಶ್ವರನು, ಆತ್ಮೇಶ್ವರನು, ಭೂತೇಶ್ವರನು, ಸಕಲ ಚರಾಚರಗಳಿಗು ನಾಥನಾದ ಸರ್ವೇಶ್ವರನು ಆ ಪರಬ್ರಹ್ಮತತ್ವವೇ!
ಶ್ರೀಪರಮೇಶ್ವರನನ್ನು ಈಶ್ವರರಲ್ಲೆಲ್ಲಾ ಈಶ್ವರನಾದ ಮಹೇಶ್ವರನಾಗಿಯೂ, ದೇವತೆಗಳ ನಾಥನಾದ ಸುರೇಶ್ವರ, ದೇವದೇವ, ಮಹಾದೇವ ಎಂಬ ಹೆಸರುಗಳಿಂದಲೂ, ಕಾರಣ-ಸೂಕ್ಷ್ಮ-ಸ್ಥೂಲ ಲೋಕಗಳೆಲ್ಲದರ ಅಧಿಪತಿಯಾದ ವಿಶ್ವನಾಥನಾಗಿಯೂ (ವಿಶ್ವೇಶ್ವರ, ಜಗದೀಶ್ವರ, ಜಗನ್ನಾಥ), ಕಾಲದ ನಾಥನಾದ ಮಹಾಕಾಲನಾಗಿಯೂ (ಕಾಲೇಶ್ವರ, ಕಾಲನಾಥ), ಚರಾಚರಗಳೆಲ್ಲದರ ಆಶ್ರಯವಾದ ಪಶುಪತಿಯಾಗಿಯೂ (ಭೂತನಾಥ, ಭೂತೇಶ್ವರ, ಗಣಪತಿ, ಗಣೇಶ, ಗಣೇಶ್ವರ, ಗಣನಾಥ, ಜೀವನಾಥ, ಜೀವೇಶ್ವರ, ಆತ್ಮನಾಥ, ಆತ್ಮೇಶ್ವರ) ವೇದೋಪನಿಷತ್ತುಗಳು ಮತ್ತು ಋಷಿ ಪರಂಪರೆಗಳು ಒಂದೇ ರೀತಿ ವರ್ಣಿಸುತ್ತವೆ!
ಶ್ರೀಪರಮೇಶ್ವರನು ಅನಂತನು. ಅನಂತವಾದ (ಅಸಂಖ್ಯಾತ, ಎಣೆಯಿಲ್ಲದ) ಗುಣಗಳು, ಶಕ್ತಿಗಳು ಮತ್ತು ನಾಮಗಳನ್ನು ಹೊಂದಿರುವವನು. ಪರಮಶಿವ, ಪರಾಶಕ್ತಿ, ವಿಷ್ಣು, ಬ್ರಹ್ಮ, ರುದ್ರ, ಶಂಕರ, ಶಂಭು, ಗಣಪತಿ, ಸುಬ್ರಹ್ಮಣ್ಯ, ಶಾಸ್ತಾ, ಸನಾತನನು, ಪರಮಾತ್ಮ, ಪರಂಪೊರುಳ್, ಪರಬ್ರಹ್ಮ ಹೀಗೆ ಅನೇಕ ಹೆಸರುಗಳಿವೆ, ಆ ಪರಮತತ್ವಕ್ಕೆ.
ಮೂರು ಲೋಕಗಳು (ಬೋಧ-ಊರ್ಜ-ಭೌತಿಕ ಮಂಡಲಗಳು ಅಥವಾ ಸತ್ವರಜೋಸ್ತಮೋಲೋಕಗಳಾದ ಕಾರಣ-ಸೂಕ್ಷ್ಮ-ಸ್ಥೂಲಲೋಕಗಳು), ಕಾಲ, ಜೀವಿಗಳು ಇವುಗಳು ಉಂಟಾಗುವುದಕ್ಕೂ ಮೊದಲು ಇದ್ದ ಆದ್ಯನು, ಇವುಗಳೆಲ್ಲಾ ಉಂಟಾಗುವಾಗಲೂ, ಪರಿವರ್ತನೆಗೊಳ್ಳುವಾಗಲೂ, ಅದರ ನಂತರವೂ ತನ್ನ ಸ್ವಭಾವದಲ್ಲಿ, ಶಕ್ತಿವಿಶೇಷಗಳಲ್ಲಿ, ಮಹಿಮೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ, ಸೃಷ್ಟಿ ಪರಿಣಾಮಗಳಿಗು, ಪ್ರಕೃತಿನಿಯಮಗಳಿಗೂ ಒಳಪಡದೆ ಇರುವ ಅವ್ಯಯನು (ಅಚ್ಯುತನು), ಕೊನೆಯಲ್ಲಿ ಎಲ್ಲವನ್ನೂ ತನ್ನಲ್ಲಿ ಲೀನಗೊಳಿಸಿ ಏಕಮಾತ್ರಸತ್ಯಸ್ವರೂಪಿಯಾಗಿ ಬೆಳಗುವ ಕೇವಲನೂ ಆದ ಕಾರಣ ಅವನು ಸನಾತನನಾದನು.
ಮಂಗಳಮೂರ್ತಿಯಾದ ಶಂಭುವು, ಪರಮ ಒಳಿತನ್ನು ನೀಡುವ ಶಂಕರನು, ಎಲ್ಲದಕ್ಕೂ ಮೂಲವಾದ ನಾರಾಯಣನು, ಎಲ್ಲೆಡೆ ವ್ಯಾಪಿಸಿರುವ ವಿಷ್ಣುವು, ವಿಶ್ವೋತ್ಪತ್ತಿಗೆ ಕಾರಣಭೂತನಾದ್ದರಿಂದಲು ಹಾಗೂ ಬೃಹತ್ತಾದ ಸೃಷ್ಟಿಜ್ಞಾನ (ಪ್ರಪಂಚಬೋಧ) ಇರುವುದರಿಂದಲು ಬ್ರಹ್ಮನೂ ಅವನೇ. ಎಲ್ಲರನ್ನೂ ರಮಿಸುವ ರಾಮನು, ಎಲ್ಲರನ್ನೂ ತನ್ನೆಡೆಗೆ ಆಕರ್ಷಿಸುವ ಕೃಷ್ಣನು, ಸರ್ವ ದುಃಖದುರಿತಗಳನ್ನು ಪಾಪಗಳನ್ನೂ ಸಂಹರಿಸುವ ಹರನು, ವಿಶ್ವದ ಪ್ರಭುವಾದ ಹರಿಯು, ಜ್ಞಾನ ನೀಡಿ ಮಾಯೆ ಮತ್ತು ಅವಿದ್ಯೆಯನ್ನು ನಿವಾರಿಸಿ ಮೋಕ್ಷ ನೀಡುವ ರುದ್ರನೂ ಆದ ಪರಂಜ್ಯೋತಿ ಸಚ್ಚಿದಾನಂದಸ್ವರೂಪಿಯಾದ ಏಕ ಪರಬ್ರಹ್ಮತತ್ವವೇ ಸನಾತನಧರ್ಮದ ಪರಮೇಶ್ವರ.
ಜನನಮರಣರಹಿತನಾದ ಏಕರಕ್ಷಕನಾದ್ದರಿಂದ ಅಜೈಕಪಾತ್ ಮತ್ತು ಎಲ್ಲದಕ್ಕೂ ಆಧಾರವಾದ್ದರಿಂದ ಅಹಿರ್ಬುಧ್ನ್ಯನೂ ಅವನೇ. ಪರಂಪೊರುಳ್ ಸರ್ವವ್ಯಾಪಿಯೂ ಸರ್ವಾಂತರ್ಯಾಮಿಯೂ ಆಗಿದೆ. ಸಮಷ್ಟಿ ರೂಪದಲ್ಲಿ ಬ್ರಹ್ಮ ಮತ್ತು ವ್ಯಷ್ಟಿ ರೂಪದಲ್ಲಿ ಆತ್ಮ. ಶ್ರೀಪರಮೇಶ್ವರನು ವಾಸ್ತವವಾಗಿ ನಿರ್ಗುಣನು. ಸತ್ವರಜಸ್ತಮೋಗುಣಗಳೆಂಬ ತ್ರಿಗುಣಗಳಿಗತೀತನಾದ್ದರಿಂದಲೂ, ಮಾಯೆ ಬಾಧಿಸದ ಕಾರಣದಿಂದಲೂ ನಿರ್ಗುಣ ಎಂದು ವಿಶೇಷವಾಗಿ ಹೇಳಲಾಗುತ್ತದೆ. ನಿರಂಜನ, ನಿರವದ್ಯ, ನಿರಾಮಯ ಇವೆಲ್ಲಾ ಪರ್ಯಾಯ ಪದಗಳು. ಆದರೆ ಪ್ರಕೃತಿಯಲ್ಲಿ ಸ್ವಯಂ ಸೃಷ್ಟಿ ಪ್ರಕ್ರಿಯೆಗಳು ಮತ್ತು ಪ್ರತಿಭಾಸೆಗಳು ಪ್ರಾರಂಭವಾದಾಗ ಹಿರಣ್ಯಗರ್ಭನೆಂಬ ಸಗುಣನಾದನು.