ಆರ್ಷ ವಿದ್ಯಾ ಸಮಾಜದ ಪಶ್ಚಿಮ ಬಂಗಾಳ ಕಾರ್ಯಕೇಂದ್ರ ಸಾಕಾರಗೊಂಡಿದೆ!
ದುರ್ಗಾಪುರ:
ಆರ್ಷ ವಿದ್ಯಾ ಸಮಾಜದ ನೂತನ ಕಾರ್ಯಕೇಂದ್ರದ ಉದ್ಘಾಟನೆಯು, ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ 27-06-2026 (ಶನಿವಾರ) ಮಧ್ಯಾಹ್ನ 12.25 ಕ್ಕೆ, ಆಚಾರ್ಯ ಶ್ರೀ ಕೆ ಆರ್ ಮನೋಜ್ ಜಿ, ಶ್ರೀ ದೇವದತ್ ಜಿ (ಬಿಜೆಪಿ ಮುಖಂಡರು ಮತ್ತು ಸಿಂಗಬಾಹಿನಿ ಅಧ್ಯಕ್ಷರು), ಶ್ರೀಮತಿ ರೇಖಾ ಲಖೋಟಿಯಾ ಜಿ (ಅಖಿಲ ಭಾರತವರ್ಷ ಮಹೇಶ್ವರಿ ಮಹಿಳಾ ಸಂಘಟನ್ ಪಶ್ಚಿಮ ಬಂಗಾಳ ರಾಜ್ಯ ಅಧ್ಯಕ್ಷರು), ಶ್ರೀ ಆರ್ಯಂತ್ ಕುಮಾರ್ ಜಿ (ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ್ ವ್ಯವಸ್ಥಾ ಪ್ರಮುಖ್) ಇವರು ಜ್ಯೋತಿ ಬೆಳಗಿಸುವುದರ ಮೂಲಕ ನೆರವೇರಿಸಿದರು.



ಭಾರತೀಯ ಜನತಾ ಪಕ್ಷದ ಮುಖಂಡರು ಮತ್ತು ಸಿಂಗಬಾಹಿನಿ ಅಧ್ಯಕ್ಷರಾದ ಶ್ರೀ ದೇವದತ್ ಮಾಜಿ ಅವರು ಮುಖ್ಯ ಭಾಷಣ ಮಾಡಿದರು. ಆರ್ಷ ವಿದ್ಯಾ ಸಮಾಜದ ನಿರ್ದೇಶಕರಾದ ಆಚಾರ್ಯ ಶ್ರೀ ಕೆ. ಆರ್ ಮನೋಜ್ ಜಿ ಅವರು ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ದುರ್ಗಾಪುರ ಈಸ್ಟ್ MLA ಶ್ರೀ ಚಂದ್ರಶೇಖರ್ ಬ್ಯಾನರ್ಜಿ, ಭಾರತೀಯ ಮಜ್ದೂರ್ ಸಂಘದ ಮುಖಂಡರಾದ ಶ್ರೀ ಜೈನಾಥ್ ಛುಬೇ ಜಿ, ಶ್ರೀಮತಿ ರೇಖಾ ಲಖೋಟಿಯಾ ಜಿ, ಶ್ರೀ ಆರ್ಯಂತ್ ಕುಮಾರ್ ಬೊರಾರ್ ಜಿ ಅವರು ಶುಭ ಹಾರೈಸಿದರು.
ಕುಮಾರಿ ಕೃಷ್ಣಪ್ರಿಯಾ ಅವರ ಈಶ್ವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ಆರ್ಷ ವಿದ್ಯಾ ಸಮಾಜದ ಪ್ರಥಮ ಮಹಿಳಾ ಪ್ರಚಾರಕಿ ಒ. ಶ್ರುತಿ ಜಿ ಅವರು ಸ್ವಾಗತಿಸಿ, ಡಾ. ಅನಘಾ ಜಿ ಅವರು ವಂದಿಸಿದರು. ಶ್ರುತಿ ಜಿ ಅವರ ವಂದೇ ಮಾತರಂ ಗಾಯನದ ನಂತರ ಮಂಗಳಾರತಿಯೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಂಡವು.
ಪಶ್ಚಿಮ ಬಂಗಾಳದ ದುರ್ಗಾಪುರ, ಐ.ಕ್ಯೂ ಸಿಟಿಯ ಕಟ್ಟಡ ಸಂಖ್ಯೆ: MC- 2 ರ 9ನೇ ಮಹಡಿಯಲ್ಲಿರುವ ಹೊಸ ಕೇಂದ್ರದಲ್ಲಿ ಮಧ್ಯಾಹ್ನ 12.25 ರಿಂದ 1.40 ರವರೆಗೆ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ವಂಗದೇಶದ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ರಂಗಗಳ ಪ್ರಮುಖರು ಭಾಗವಹಿಸಿದ್ದರು.


ಸನಾತನ ಧರ್ಮದ ಪಂಚಮಹಾ ಕರ್ತವ್ಯ ನಿರ್ವಹಣೆಯ ಮೂಲಕ ‘ವಿಶ್ವವನ್ನೇ ಶ್ರೇಷ್ಠವಾಗಿಸುವುದು’ ಎಂಬ ಗುರಿ ಸಾಧನೆಗಾಗಿ ಅಹೋರಾತ್ರಿ ಶ್ರಮಿಸುತ್ತಿರುವ ಆರ್ಷ ವಿದ್ಯಾ ಸಮಾಜವು ಹಮ್ಮಿಕೊಳ್ಳುವ ವಿವಿಧ ಶಿಕ್ಷಣ, ಸೇವೆ, ಸಬಲೀಕರಣ ಮತ್ತು ಸಂರಕ್ಷಣಾ ಚಟುವಟಿಕೆಗಳನ್ನು ಪಶ್ಚಿಮ ಬಂಗಾಳದ ದುರ್ಗಾಪುರ ಕೇಂದ್ರದ ನೇತೃತ್ವದಲ್ಲಿ ಆಯೋಜಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.








